Thursday, 20 May 2010

"ಮಲೆಗಳಲ್ಲಿ ಮದುಮಗಳು" ಸಂಭ್ರಮಿಸಿದ ಪರಿ

ಮೈಸೂರು ರಂಗಾಯಣದಂಗಳದಲ್ಲಿ ಮಲೆನಾಡು ಸೃಷ್ಟಿಯಾಗಿ, ಅದರೊಳಗೆ "ಮಲೆಗಳಲ್ಲಿ ಮದುಮಗಳು" ಸಂಭ್ರಮಿಸಿದ ಪರಿಗೆ ರಂಗಪ್ರೇಕ್ಷಕರೆಲ್ಲ ಮೂಕವಿಸ್ಮಿತ!

ಕನ್ನಡದ ಮಹಾಕಾದಂಬರಿ (ಕುವೆಂಪು) ಯೊಂದು ಹೀಗೆ ಅಕ್ಷರಶಃ ಜೀವಪಡಕೊಂಡು ಒಂದಿಡೀ ರಾತ್ರಿ ಬದುಕಿತು! (ಹೀಗೆ ಹಲವು ರಾತ್ರಿಗಳನ್ನೂ ಈಗ ಕಾಣುತ್ತಿದೆ). ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಒಂದು ವಿಶಿಷ್ಠ ಪ್ರಯೋಗವಾಗಿ ದಾಖಲಾಗಿರುವ "ಮಲೆಗಳಲ್ಲಿ ಮದುಮಗಳು" ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ.

ಪ್ರಯೋಗದಲ್ಲಿ ಬಹುವಾಗಿ ಸೆಳೆದಿದ್ದು ರಂಗವಿನ್ಯಾಸ (ವಿನ್ಯಾಸ: ದ್ವಾರ್ಕಿ). ಮಲೆನಾಡಿನ ಒಂದು ಭಾಗವನ್ನೇ ಕತ್ತರಿಸಿ ತಂದು ರಂಗಾಯಣದ ಆವರಣದಲ್ಲಿಟ್ಟಂತಿತ್ತು. ನಾಟಕದ ಜೀವಾಳವೇ ಆ ವಿನ್ಯಾಸ ಎಂದರೆ ತಪ್ಪಲ್ಲ. ಒಟ್ಟಾರೆಯ ಕಥೆಯ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಅದರಿಂದ ಪಾತ್ರಗಳನ್ನು ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ರಂಗದ ಮೇಲೆ ಕಾದಂಬರಿ ತರಲು ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿತ್ತು. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಮೂಡ್ ಗೆ ತಕ್ಕಂತೆ ರಂಗಸಜ್ಜಿಕೆ ಮಾಡಲಾಗಿತ್ತು. ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿನದು ಮಿಕ್ಕ ರಂಗಸಜ್ಜಿಕೆಗಳಲ್ಲಿ... ಹೀಗೆ ದೃಶ್ಯಗಳು ವಿವಿಧ ರಂಗಸಜ್ಜಿಕೆಗಳಿಗೆ ಬದಲಾದಂತೆ ಪ್ರೇಕ್ಷಕರೂ ಶಿಫ್ಟ್ ಆಗುತ್ತಿದ್ದರು. ಪರಿಸರವನ್ನು ಪ್ರೇಕ್ಷಕರಿಗೆ ತೋರಿಸುವ ಬದಲು, ಪ್ರೇಕ್ಷಕರನ್ನೇ ಆ ಪರಿಸರಕ್ಕೆ ಕೊಂಡೊಯ್ಯುವ ಬಸವಲಿಂಗಯ್ಯ ಸೂಕ್ತ ತಂತ್ರವನ್ನೇ ಆಯ್ದುಕೊಂಡಿದ್ದಾರೆ. ಇಂಥ ಪರಿಸರ ಸ್ನೇಹಿ ನಾಟಕಕ್ಕೆ ಈ ವಾತಾವರಣವೇ ಬೇಕು ಕೂಡ. ಇದೊಂದು ವಿಶಿಷ್ಠ ರಂಗಾನುಭವ. ಪ್ರಯೋಗ ಇಂಟೀಮೇಟ್ ಪ್ರೊಸಿನಿಯಂ ಥಿಯೇಟರ್ ಅಥವಾ ಎನ್ವಿರಾನ್ಮೆಂಟ್ ಥಿಯೇಟರ್ ಗಿಂತ ಕೊಂಚ ಭಿನ್ನವಾಗಿದೆ. ಈ ಸಾಹಸ ನೋಡಿದಾಗ ನನಗೆ ದೆಹಲಿಯ ಹೆಸರಾಂತ ರಂಗಕರ್ಮಿ ಅಮೀರ್ ರಜಾ ಹುಸೇನ್ ನೆನಪಾದರು. "ದಿ ಲೆಜೆಂಡ್ ಆಫ್ ರಾಮಾ", ಕಾರ್ಗಿಲ್ ಕುರಿತ "ಫಿಫ್ಟಿ ಡೇ ವಾರ್" ಮತ್ತಿತರ ಪ್ರಯೋಗಗಳನ್ನು ಇಂಥ ವಿನ್ಯಾಸದಲ್ಲಿ ನಿರೂಪಿಸಿ ಆಗಲೇ ಭಾರತೀಯ ರಂಗಭೂಮಿಗೊಂದು ಹೊಸ ಅನುಭವ ಕಟ್ಟಿಕೊಟ್ಟು ಹೆಸರಾದವರು. ಕಾರ್ಗಿಲ್ ಕುರಿತ ನಾಟಕಕ್ಕೆ ಅವರು ಆರು ಎಕರೆ ಪ್ರದೇಶವನ್ನೇ ಬಳಸಿಕೊಂಡಿದ್ದರು. ಅಲ್ಲಿ ಹೆಲಿಕಾಪ್ಟರ್, ಯುದ್ಧದ ಸನ್ನಿವೇಶಗಳನ್ನೆಲ್ಲ ಯಥಾವತ್ ಆಗಿ ಸೃಷ್ಟಿಸಿದ್ದರು. ಅಲ್ಲೂ ಪ್ರೇಕ್ಷ್ಕರು ದೃಶ್ಯದಿಂದ ದೃಶ್ಯಕ್ಕೆ ಶಿಫ್ಟ್ ಆಗುತ್ತಿದ್ದರು.

ಕನ್ನಡದ ಸಂದರ್ಭದಲ್ಲಿ ಕ್ರೈಸ್ತನ ಬಗ್ಗೆ ಇಕ್ಬಾಲ್ ಅಹಮದ್ ಮಾಡಿದ ಸಾಹಸ, ವಾಲ್ಟರ್ ಡಿಸೋಜ ನಿರ್ದೇಶನದ 'ಸ್ಪಾರ್ಟಕಸ್' ನಾಟಕ (ಧಾರವಾಡದ ಸಾಹಿತ್ಯ ಭವನ ಕಟ್ಟಡವನ್ನೇ ಬಳಸಿಕೊಂಡು ಮಾಡಿದ ಪ್ರಯೋಗ. ರಂಗವಿನ್ಯಾಸ ನಾನೇ ಮಾಡಿದ್ದೆ. ರೋಮನ್ ವಿದ್ರೋಹಿ ಸ್ಪಾರ್ಟಕಸ್ ನಾಟಕಕ್ಕೆ ರೋಮನ್ ಶೈಲಿಯನ್ನು ನೆನಪಿಸುವ ಧಾರವಾಡ ಸಾಹಿತ್ಯ ಭವನ ಕಟ್ಟಡ ಸೂಕ್ತವೆನಿಸಿ, ಅದನ್ನೇ ಕೊಂಚ ಇತರ ಪರಿಕರಗಳೊಂದಿಗೆ ಮಾರ್ಪಡಿಸಿ ಬಳಸಿಕೊಂಡಿದ್ದೆವು ) ಪ್ರಯೋಗಗಳಲ್ಲಿ ತಕ್ಕಮಟ್ಟಿನ ಇಂಥ ತಂತ್ರ ಬಳಸಿದ್ದರ ನೆನಪಾಗುತ್ತಿದೆ.

ರಂಗಾಯಣದ ಮಾಗಿದ ಕಲಾವಿದರು ಮತ್ತು ಈ ಪ್ರಯೋಗಕ್ಕೆಂದೇ ತರಬೇತುಗೊಂಡ ಹೊಸಬರು ಒಂದಿಡೀ ರಾತ್ರಿ ಸತತ ಒಂಭತ್ತು ಗಂಟೆಗಳ ಕಾಲ ನಾಲ್ಕು ರಂಗ ಸಜ್ಜಿಕೆಗಳಲ್ಲಿ ಕಾದಂಬರಿಯನ್ನೇ ಬದುಕಿದರು. ಮಲೆನಾಡಿನ ಪರಿಸರ, ಅಲ್ಲಿನ ಜನಸಂಸ್ಕೃತಿಯನ್ನು ಕಣ್ಮುಂದೆ ಕಟ್ಟಿಕೊಟ್ಟರು. ಡಾ. ಕೆ.ವೈ. ನಾರಾಯಣ ಸ್ವಾಮಿ ಕಾದಂಬರಿಯನ್ನು ರಂಗಕ್ಕಿಳಿಸಿದ ಪರಿ, ಆ ಅದ್ಭುತ ರಂಗವಿನ್ಯಾಸ, ಬೆಳಕು, ರಂಗಪರಿಕರ, ಗುತ್ತಿ, ಹುಲಿಯ (ಗುತ್ತಿನಾಯಿ) ಪಾತ್ರ, ಹೆಗ್ಗಡತಿಯರು, ಪೀಂಚಲು, ಐತಿ, ಸುಬ್ಬಣ್ಣ ಹೆಗ್ಗಡೆ, ತಿಮ್ಮಪ್ಪ ಹೆಗ್ಗಡೆ, ನಾಗಕ್ಕ, ವೆಂಕಟಣ್ಣ, ಪಾದ್ರಿ, ದೇವಯ್ಯ ಪಾತ್ರಗಳ ಅಭಿನಯ ಒಂದು ವಿಶಿಷ್ಠ ರಂಗಾನುಭವ ನೀಡಿತು. ಇವರೆಲ್ಲರ ಶ್ರಮಕ್ಕೆ ಹ್ಯಾಟ್ಸಾಫ್!

ಕನ್ನಡದ ರಂಗಭೂಮಿಯನ್ನು ಬಸವಲಿಂಗಯ್ಯ ಬಹು ಎತ್ತರಕ್ಕೆ ಕೊಂಡೊಯ್ಯಬಲ್ಲರೆನ್ನುವುದನ್ನು ಈ ಪ್ರಯೋಗ ಸಾಬೀತುಪಡಿಸಿತು.

ಪ್ರಯೋಗದ ಒಳದನಿಯ ಬಗ್ಗೆ...

ಯಾವುದೇ ಕೃತಿಯ ಸಬ್ ಟೆಕ್ಸ್ಟ್ ಮೇಲೇ ಕಣ್ಣಿಡುವ ಬಸವಲಿಂಗಯ್ಯ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಮೂಲ ಆಶಯಗಳನ್ನು ಕಡೆಗಣಿಸಿಲ್ಲ. ಆದರೆ, ಇಡೀ ಕಥಾಹಂದರದ ಒಳದನಿಯಲ್ಲಿ ಗುತ್ತಿ ಪಾತ್ರಕ್ಕಿರುವ ಸ್ಕೋಪ್ ಬಸುಗೆ ಸೆಳೆದಂತಿದೆ. ಆತನ ಮತ್ತಷ್ಟು ಹೀರೋ ಮಾಡುವ ಸಾಹಸಕ್ಕೆ ಇಲ್ಲಿ ಅವಕಾಶ ಇದ್ದುದನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಆ ಮೂಲಕ ಇಡೀ ಕಾದಂಬರಿಯನ್ನು ಮತ್ತೆ ಬರೆಯಲೆತ್ನಿಸಿದ್ದಾರೆ ಬಸವಲಿಂಗಯ್ಯ.

ಕೆಲವು ಪಾತ್ರಗಳ ಮೇಲಿನ ಅವರ ಸಾಮಾಜಿಕ ಕಾಳಜಿಗಿಂತ ರಾಜಕೀಯ ಕಾಳಜಿ ಹೆಚ್ಚು ಕೆಲಸ ಮಾಡಿದೆ. ಗುತ್ತಿ ಬಗ್ಗೆ ಅವರದು ಹೀರೋಯಿಸಂ ಅಪ್ರೋಚ್. ಹೆಣ್ಣು ಪಾತ್ರಗಳ ಬಗ್ಗೆ ಫೆಮಿನಿಸ್ಟ್ ಧೋರಣೆ. ಕಾದಂಬರಿಯ ಕಥೆ ಕೂಡ ಫೆಮಿನಿಸಂ ಗೆ ಹೆಚ್ಚು ಒತ್ತು ಕೊಟ್ಟಿದೆ. ಈ ಕಾಲದಲ್ಲಂತೂ ಫೆಮಿನಿಸಂ ಒಂದು ಜನಪ್ರಿಯ ಧೋರಣೆಯಾಗಿಬಿಟ್ಟಿದೆ... ಮಾರುಕಟ್ಟೆ ಸಂಸ್ಕೃತಿಯ ಲಾಭಕ್ಕೆ ಹುಟ್ಟಿಕೊಂಡ ಫೆಮಿನಿಸಂ ಮತ್ತು ಮಲೆಗಳಲ್ಲಿ ಮದುಮಗಳ ಫೆಮಿನಿಸಂ ಎರಡೂ ಬೇರೆ ನೆಲೆಯಲ್ಲಿದ್ದರೂ ಕಾಲದ ಹೊಡೆತಕ್ಕೆ ಮಲೆಗಳಲ್ಲಿ ಮದುಮಗಳೂ ಕೂಡ ಮಾರುಕಟ್ಟೆಗೇ ಬಂದು ನಿಲ್ಲುತ್ತಾಳೆ. ಇದು ಈಗ ನಾಟಕವಾಗಿ ಪ್ರದರ್ಶನಗಳ ಮೇಲೆ ಪ್ರದರ್ಶನ ಕಾಣುತ್ತಿರುವುದು ಕೂಡ ಮಾರುಕಟ್ಟೆ (ಪ್ರತಿಷ್ಠೆ, ಸ್ವಪ್ರತಿಷ್ಠೆ, ಸ್ವಾರ್ಥ, ಪ್ರಚಾರ, ರಾಜಕೀಯ ಲಾಭ ಅಥವಾ ಅಜೆಂಡಾ) ಸಂಸ್ಕೃತಿಯ ನೆಲೆಯಲ್ಲೇ.

ಇಡೀ ನಾಟಕದಲ್ಲಿ ಹೆಗ್ಗಡೆಯರ ದರ್ಪ, ಅವರ ಹೆಂಗಸರ ಹಾದರ, ಅವರೊಳಗೆ ಆಗಾಗ ತಮ್ಮ ಹಿತಾಸಕ್ತಿಗಾಗೇ ಮಿಸುಕಾಡುವ ಮನುಷ್ಯತ್ವ, ದಲಿತರ ಸ್ಥಿತಿ, ನಾಯಿ, ಕೀಟಗಳು, ಪಶುಪಕ್ಷಿಗಳು, ಕಾಡು, ಹೆಂಡ ....ಹೀಗೆಲ್ಲ ಎಲ್ಲದಕ್ಕೂ ಕಥೆಗಾರ ಮತ್ತು ನಿರ್ದೇಶಕರ ದೃಷ್ಟಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮದ ಮೇಲಿದೆ. ರಾಜಕೀಯ ಆಯಾಮದಲ್ಲೂ ಕಥೆಯನ್ನು ಅಥವಾ ನಾಟಕವನ್ನು ಕಂಡಿದ್ದರೆ ಗುತ್ತಿ ಇಲ್ಲಿ ಕ್ರಾಂತಿಕಾರಿ ಹೀರೋ ಆಗುತ್ತಿದ್ದ. ಆದರೆ, ಸಂಘರ್ಷವೇ ಇಲ್ಲ ಇಲ್ಲಿ! ಗುತ್ತಿ ಕೇವಲ ಆತ್ಮಾನುಕಂಪ ಗಳಿಸೋದಕ್ಕೆ ಯತ್ನಿಸುತ್ತಾನೆ. ಅವನ ಮ್ಯಾನರಿಸಂ, ಸುಳ್ಳು, ತಂತ್ರ, ದೈನ್ಯತೆ ಎಲ್ಲವೂ ಮೇಲ್ವರ್ಗದವರ ಅನುಕಂಪ ಸಂಪಾದನೆಗೆ ಸೀಮಿತಗೊಂಡಿದೆ. ಮೀಸಲಾತಿ ಕೂಡ ಇದೇ ಮನಸ್ಥಿತಿಯದು. ಮೀಸಲಾತಿ ಅನ್ನೋದು ಮೇಲ್ವರ್ಗದವರ ಹುನಾರೇ. ಕ್ರಾಂತಿಯ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕೆನ್ನುವ ಅಂಬೇಡ್ಕರ್ ಹಂಬಲದ್ದಲ್ಲ ಇದು. ಅವರು ಕಂಡ ಕನಸಿನಂತೆ ಕ್ರಾಂತಿ ಏನಾದರೂ ನಡೆದಿದ್ದರೆ ದಲಿತರು ಇನ್ನೂ ಮೀಸಲಾತಿ ನಂಬಿಕೊಂಡೇ ಬದುಕಬೇಕಾಗುತ್ತಿರಲಿಲ್ಲ. ಅವರದೇ ರಾಜ್ಯ ಸ್ಥಾಪನೆಯಾಗುತ್ತಿತ್ತೋ ಏನೋ? ಪ್ರಸಕ್ತ ಸ್ಥಿತಿಯಲ್ಲಿ ಮಾಯಾವತಿ ಮಾತ್ರ ದಲಿತ ನಾಯಕತ್ವಕ್ಕೆ ಯತ್ನಿಸುತ್ತಿರುವುದ ಬಿಟ್ಟರೆ ಉಳಿದ ದಲಿತ ನಾಯಕರೆಲ್ಲ ಆಯಾಯ ಪಕ್ಷಗಳ ಮೀಸಲಾತಿ ಎನ್ನುವ ಕಂಫರ್ಟ್ ಝೋನ್ ಗಳಲ್ಲಿ ಬಂಧಿಯಾಗಿದ್ದಾರಲ್ಲವೇ?... ಅವರದೂ ಗುತ್ತಿಯ ಪಾಡು. ಇಡೀ ಜನಾಂಗ ಗುತ್ತಿನಾಯಿಯ ಪಾಡಿನಂಥದು. ನಾಟಕದಲ್ಲಿ ಗುತ್ತಿ ಉಳಿಸಲು ಹೇಗೆ ನಾಯಿ ಜೀವಪಣಕ್ಕಿಟ್ಟು ನಿಲ್ಲುವುದೋ, ಹಾಗೆ ದಲಿತರೆಲ್ಲ ತಮ್ಮ ನಾಯಕರ ಕುರ್ಚಿ-ಮಾನ ಉಳಿಸಲು ಈಗಲೂ ಶೋಷಣೆಯ ಸೆಳವಲ್ಲೇ ಈಜುತ್ತಿದ್ದಾರೆ.

ದೇವಯ್ಯ ಮತ್ತಿತರ ಗೌಡರ ಭಾನಗಡಿಗಳೆಲ್ಲ ಇಲ್ಲಿ ಹಾಸ್ಯದ ಲೇಪದಲ್ಲಿ ತೇಲಿ ರೋಮ್ಯಾಂಟಿಕ್ ಆಗಿ ಕಾಣಿಸುತ್ತವೆ. ಅದೆಲ್ಲ ಅವರ ರಸಿಕತೆ ಅಷ್ಟೆ ಎನ್ನುವ ಹಾಗಿದೆ ಚಿತ್ರಣ. ಗೌಡತಿಯರು ಅಥವಾ ಹೆಗ್ಗಡತಿಯರ ಹಾದರಗಳು, ಅವರಿವರ ಜತೆ ಹಾಸಿಗೆ ಬದಲಾಯಿಸುವ ಲಂಪಟ ಹೆಣ್ಣುಗಳು, ಸ್ವತಃ ಸೊಸೆಯನ್ನೇ ಹಾದರದ ಪ್ಪಲಂಗಕ್ಕೇರಿಸುವ ಅತ್ತೆಯಂದಿರು... ಇದೆಲ್ಲ ರಸಿಕತೆ ಮತ್ತು ಲೈಂಗಿಕ ಬಯಕೆಗಳಷ್ಟೇ ಎಂದು ತೋರಿಸುವುದು ನಾಟಕದ ಒಳಗಿನ ಹುನಾರು. ಇದನ್ನೇ ಬೇರೊಂದು ಕೆಳಜಾತಿ ಮಾಡಿದ್ದರೆ? ಅದು ಹಾದರ! ಕಥೆಯ ಈ ಮನೋಧರ್ಮವೂ ಒಂದು ಹಿಂಸೆ.

ಕ್ರೈಸ್ತ ಪಾದ್ರಿ ಪಾತ್ರವನ್ನು ತುಂಬ ತಮಾಷೆಯಾಗಿ ಕಟ್ಟಿಕೊಟ್ಟಿದ್ದಾರೆ. ನಾಟಕದಲ್ಲಿ ಬರುವ ಸೈಕಲ್ ಎನ್ನುವುದು ಇಲ್ಲಿ ಆಧುನಿಕ ಮನೋಧರ್ಮದ ಸಂಕೇತ. ಆಗಿನ ಮಲೆನಾಡಿಗರ ಮನಸ್ಥಿತಿ ಆಧುನಿಕ ವಿರೋಧಿಯಾಗಿತ್ತು ಎನ್ನುವುದಕ್ಕೆ ಅದನ್ನು ಲೇವಡಿ ಮಾಡುವ ದೃಶ್ಯವೇ ಸಾಕ್ಷಿ. ಅದು ಒಟ್ಟು ಮತವೊಂದರ ಲೇವಡಿಯ ಒಂದಂಶದ ವಿಸ್ತಾರ ಪಡಕೊಳ್ಳುವುದು ಇದರೊಳಗಿನ ಅತ್ಯಂತ ದೊಡ್ಡ ಹಿಂಸೆ.

ಮತಾಂತರದ ಬಗ್ಗೆ ನಾಟಕದಲ್ಲಿ ಆಡಿದ ಮಾತುಗಳು ಮತೀಯವಾದದ ಧೋರಣೆಯಾಗಿ ಕಾಡುತ್ತವೆ. ಸ್ವತಃ ಕುವೆಂಪು ಮತಾಂತರದ ವಿರೋಧಿಯಾಗಿದ್ದರು. ಅದಕ್ಕೆ ಅವರಿಗೆ ಹಿಂದು ಧರ್ಮದ ಮೇಲಿನ ಪ್ರೀತಿಯೇ ಕಾರಣವಿರಬಹುದು. ಅಥವಾ ರಾಮಕೃಷ್ಣ ಪರಮಹಂಸ, ವಿವೇಕಾನಂದರಿಂದ ಪಡೆದ ಸ್ಫೂರ್ತಿಯೂ ಕಾರಣವಿರಬಹುದು. ಹಿಂದೂ ಧರ್ಮದಲ್ಲಿ ಬ್ರಾಹ್ಮಣರ ಮೇಲಾಟ ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಕುವೆಂಪು ಅವರನ್ನು ಕಾಡಿಲ್ಲ ಎನ್ನುವುದು ಆಶ್ಚರ್ಯ!

ಹೆಗ್ಗಡೆಯವರಿಗೆಲ್ಲ ಹಂದಿ ಹಿಡಿಯಲು ದಲಿತರೇ ಬೇಕು. ಮತ್ತು ಅದರ ಚರ್ಮ ಸೀಳಿ ಮಾಂಸ ತೆಗೆದು ಅವರ ಕೈಗೇ ಇಡಬೇಕು. ದಲಿತರು ತಮಗಲ್ಲೋ ಅದರ ಕರುಳೋ, ಗಾಯಗೊಂಡ ಜಾಗದ ಮಾಂಸವೋ, ಹಂದಿಯ ತೊರಡೋ, ತಲೆಯೋ ಮಾತ್ರವನ್ನೇ ಪಡೆಯಬೇಕಾದ್ದು ಮಲೆನಾಡಿನ ಆ ಭಾಗದ ಸಾಮಾಜಿಕ ನ್ಯಾಯ! ಅಥವಾ ಅದೊಂದು ಸಂರಚನೆ. ಇಡೀ ನಾಟಕದಲ್ಲಿ ಇದೆಲ್ಲ ತಮಾಷೆಯಾಗಿ ಮತ್ತು ಸಾಮಾಜಿಕ ಸ್ಥಿತಿಗತಿಯ ಕಟ್ಟುಪಾಡುಗಳಿಗೆ ಪೂರಕವಾಗೇ ಇದೆ. ಇದೆಲ್ಲ ದುರಾಡಳಿತ ಎನಿಸೋದೇ ಇಲ್ಲ. ಹೆಗ್ಗಡೆಯರ ದಬ್ಬಾಳಿಕೆ ಅನಿಸೋದೇ ಇಲ್ಲ. ಆಗಿನ ಸ್ಥಿತಿಯೇ ಹಾಗಿತ್ತು ಎನ್ನುವುದು ಕೇವಲ ಸಮಜಾಯಿಷಿ.

ಹೆಗ್ಗಡೆಯರು ದಲಿತರ ಮೇಲೆ ಮಾಡುವ ದೌರ್ಜನ್ಯವಾಗಲಿ, ಅವರ ಬೆವರಿನ ಮೇಲೆ ತಮ್ಮ ಗೌಡಿಕೆಯ ದೌಲತ್ತಿನರಮನೆ ಕಟ್ಟುವುದಾಗಲಿ ಸಹಜ. ದಲಿತರ ಜತೆಗಿನ ಒಡನಾಟಕ್ಕೆ ಒಂದು ಮಟ್ಟಿನ ಮನುಷ್ಯತ್ವದ ಅಂತಃಕರಣವನ್ನು ಇಲ್ಲಿ ಹೆಗ್ಗಡೆಯವರಿಗೆ ಅಂಟಿಸಲಾಗಿದೆ. ಹೆಗ್ಗಡೆಗಳು ತಮ್ಮ ಅನುಕೂಲಕ್ಕೆಂದೇ ಹತ್ತಿರದಲ್ಲಿ ದಲಿತರಿಗೊಂದು ಕೇರಿ ರೂಪಿಸಿ, ಹೊಲ ಗದ್ದೆಗಳಲ್ಲಿ ಗೇಯುವುದಕ್ಕೆ ಅವರ ಬೆವರನ್ನು ಬಳಸಿಕೊಳ್ಳುತ್ತಾರೆ. ಬದಲಿಗೆ ಕೊಡೋದು ತುತ್ತನ್ನವಷ್ಟೇ. ಇದನ್ನೇ ಸಹಬಾಳ್ವೆ ಎನ್ನುವಂತೆ ವರ್ತಿಸುವ ಧೋರಣೆಯನ್ನೇ ಆಗಿನ ಜನಸಂಸ್ಕೃತಿಯ ಆದರ್ಶ ಎಂದು ನಾಟಕ ಹೇಳಹೊರಟಿದೆ. ದೌರ್ಜನ್ಯ, ದಲಿತರ ಶೋಷಣೆಯನ್ನು ಅದು ನೆಪಮಾತ್ರಕ್ಕೆ ಪ್ರಶ್ನಿಸುತ್ತದೆ. ಆದರೆ, ಪ್ರಶ್ನಿಸುವ ಧೋರಣೆ ರಾಜಕೀಯ. ಸಾಮಾಜಿಕ, ಸಾಂಸ್ಕೃತಿಕ ಬದ್ಧತೆಯಿಂದ ಕೂಡಿದ್ದಲ್ಲ ಎನಿಸುತ್ತದೆ.

ದಲಿತರೆಲ್ಲ ಅಥವಾ ಶೋಷಣೆಗೊಳಗಾದವರೆಲ್ಲ ಕ್ರೈಸ್ತ ಧರ್ಮಕ್ಕೆ ಅಥವಾ ಇನ್ನಾವುದೋ ಸಾಮಾಜಿಕ ಘನತೆ ತಂದುಕೊಡಬಲ್ಲ ಮತಕ್ಕೆ ಮತಾಂತರಗೊಂಡರೆ ಬ್ರಾಹ್ಮಣರ ಅಟ್ಟಹಾಸಕ್ಕೆ ಹೇಗೆ ಕಡಿವಾಣ ಬೀಳುತ್ತೊ, ಗೌಡರ ಪಾಳೆಗಾರಿಕೆಗೂ ಏಟು ಬೀಳುತ್ತಿತ್ತು. ಅದಕ್ಕೆಂದೇ ಇಲ್ಲಿ ಕ್ರೈಸ್ತರ ಬಗ್ಗೆ ವಿರೋಧ. ದಲಿತರೆಲ್ಲ ಕ್ರೈಸ್ತರಾಗಿ ಸಮಾಜದ ಮೇಲಸ್ತರಕ್ಕೆ ಹೋದರೆ, ಗೌಡರ ಹೊಲಗಳಲ್ಲಿ ಜೀತ ಮಾಡೋರು ಯಾರು? ಉಳಿಮೆ ಮಾಡೋರು ಯಾರು? ಇವರು ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರೋರು ಯಾರು?... ಒಟ್ಟಾರೆ ಯಜಮಾನಿಕೆಯ ಗತ್ತು ಹೊರಟು ಹೋಗ್ತದಲ್ಲಾ ಎನ್ನುವ ಕೊರಗು ಮತಾಂತರ ವಿರೋಧಕ್ಕೆ ಮೂಲ ಕಾರಣವಾಗಿತ್ತು. ಮತ್ತು ಈ ಯಜಮಾನಿಕೆಗೆ ಯಾವತ್ತೂ ಪುರೋಹಿತಷಾಹಿಯ ಸಾಥ್ ಇದ್ದದ್ದೇ. ನಾಟಕದಲ್ಲಿ ಹೆಗ್ಗಡೆಯ ಹುಡುಗರು ಸಂಸ್ಕೃತ ಪಾಠಶಾಲೆಗೆ ಹೋಗೋದು, ಅಯ್ಯಗಳ ಜತೆ ಪಾಠಕ್ಕಾಗಿಯಾದರೂ ಸೌಹಾರ್ದತೆ ಹೊಂದೋದು ಇದಕ್ಕೆ ಪುಷ್ಠಿ ನೀಡುತ್ತದೆ. ಪುರೋಹಿತಷಾಹಿ ಹಾಗೂ ಮೇಲ್ವರ್ಗ ಷಾಮೀಲಾಗಿ ತನ್ನುಳಿವಿಗಾಗೇ ದಲಿತರನ್ನು ಅನ್ಯ ಸಂಸ್ಕೃತಿಯತ್ತ ಹೊರಡದಂತೆ ನೋಡಿಕೊಳ್ಳೋದು ಹಿಂದೂ ಧರ್ಮದ ಉದ್ಧಾರ!.

ಇದೆಲ್ಲ ನಿರ್ದೇಶಕ ಬಸವಲಿಂಗಯ್ಯ ಅವರಿಗೆ ಕಾಡಿಲ್ಲ. ಗುತ್ತಿಯನ್ನು ಹೀರೋ ಮಾಡಬಹುದಲ್ಲ ಎನ್ನುವ ಸಾಧ್ಯತೆಯೊಂದು ಅವರನ್ನು ಯಾಮಾರಿಸಿಬಿಟ್ಟಿದೆ. ಬಿಜೆಪಿ ಮತ್ತಿತರ ಸರ್ಕಾರದಲ್ಲಿ ದಲಿತರಿಗೆ ಒಂದಷ್ಟು ಸವಲತ್ತುಗಳ ಆಮಿಷಗಳಿರೋದರಿಂದ ದಲಿತರೆಲ್ಲ ಅದರತ್ತ ಸರಿದು ನಿಂತಿದ್ದಾರಲ್ಲ ಹಾಗೆ, ಬಸವಲಿಂಗಯ್ಯ ಕೂಡ ಕಥೆಯ ಆಶಯಗಳನ್ನು ಒಪ್ಪಿಕೊಂಡಿದ್ದಾರೆ. ಅದರ ಹುನಾರಗಳನ್ನು ಸುಮ್ಮನೇ ಕಡೆಗಣಿಸಿದ್ದಾರೆ. ಹೀಗಾಗಿ ಅವರ ಸಬ್ ಟೆಕ್ಸ್ಟ್ ಮನೋಧರ್ಮ ಇಲ್ಲಿ ಅಷ್ಟು ಕೆಲಸ ಮಾಡಿಲ್ಲ. ಮತಾಂತರ ವಿರೋಧಿ ನೆಲೆಯಲ್ಲಿ ನಾಟಕವನ್ನು ರಾಜಕೀಯ ಅಜೆಂಡಾವನ್ನಾಗಿ ಮಾಡಲು ಸಾಧ್ಯ! ಈ ಹಿನ್ನೆಲೆಯಲ್ಲೇ ಇದಕ್ಕೆ ಘನ ಸರ್ಕಾರದ ಪ್ರಾಯೋಜಕತ್ವವೂ ದಕ್ಕಿರಬಹುದು.(?)

ಪಾದ್ರಿ ಪಾತ್ರವನ್ನು ಇವರು ಕಂಡ ರೀತಿಯೇ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಒಂದು ವೇಳೆ ಇಂಗ್ಲಿಷ್ ಭಾಷೆಯೇ ಬರದಿದ್ದರೆ ಕುವೆಂಪು ಇಷ್ಟು ದೊಡ್ಡ ಸಾಹಿತಿಯಾಗಲು ಸಾಧ್ಯವಿತ್ತೆ? ದೊಡ್ಡವರಾಗಲು, ವಿದ್ಯಾವಂತರಾಗಲು ಕ್ರೈಸ್ತರು ಸ್ಥಾಪಿಸುವ ಶಾಲೆಗಳು ಹಾಸ್ಟೆಲ್ ಗಳೆಲ್ಲ ಬೇಕು... ರೋಗ ರುಜಿನಗಳೆಲ್ಲ ಆವರಿಸಿದಾಗ ಅವರು ಸ್ಥಾಪಿಸುವ ಆಸ್ಪತ್ರೆಗಳು ಬೇಕು, ನೋವಿನಿಂದ ನರಳುತ್ತ ಬೆಡ್ ಮೇಲೆ ಮಲಗಿದ ರೋಗಿಗಳ ತಿಕ ತೊಳೆದು, ಉಚ್ಚೆ ಬಳಿದು ಆರೈಕೆ ಮಾಡಲು ದಾದಿಯರ ಸೇವೆ ಬೇಕು.. ಅಂಥ ಆರಾಮ, ಆರೋಗ್ಯ ವ್ಯವಸ್ಥೆ ಮಾಡಲು ಕ್ರೈಸ್ತ ಧರ್ಮ, ಕ್ರೈಸ್ತರು ಬೇಕು. ಆದರೆ, ಅವರ ಕೆಲ ಧಾರ್ಮಿಕ ಆಶಯಗಳು ಮಾತ್ರ ಇಲ್ಲೇನೂ ಮಾಡಬಾರದು!

ಪಾದ್ರಿಯ ಮಗಳ ಮೇಲೆ, ದಾದಿಯರ ಮೇಲೆ ಕಣ್ಣು ಹಾಕುವ ದೇವಯ್ಯ, ಲುಚ್ಚಾ, ಲೋಫರ್, ಫಟಿಂಗ್ ಏನೂ ಅನ್ನಿಸಿಕೊಳ್ಳುವುದಿಲ್ಲ. ಅದು ಅವನ ರಸಿಕತೆಯ ಸಂಕೇತವಷ್ಟೇ. ಹೀಗಾಗೇ ಈ ಪಾತ್ರ ಇಲ್ಲಿ ಕಾಮಿಡಿ ಪಾತ್ರವಾಗಿದೆ. ಇದೇ ಧೋರಣೆ ಕುಂಟ ವೆಂಕಣ್ಣ ಪಾತ್ರಕ್ಕೂ ಇದೆ. ಆತ ಗಂಡ ಸತ್ತ ಹಾಗೂ ಇನ್ನೂ ವಯಸ್ಸಿರುವ ಹೆಣ್ಣುಗಳ ಮೇಲೆ ಕಣ್ಣು ಹಾಕಬಲ್ಲ. ಅದು ಅವನ ಪುರುಷ ಅಹಮಿಕೆಯೂ ಹೌದು, ರಸಿಕತೆಯೂ ಹೌದು.. ಆದರೆ ಲಂಪಟತನವಲ್ಲ! ಈ ಪಾತ್ರಗಳು ರಂಗದ ಮೇಲೆ ಬಂದಾಗಲೆಲ್ಲ ಚಪ್ಪಾಳೆಗಳ ಕರತಾಡನ! ಇದೆಂಥ ಮನೋಧರ್ಮ?

ಮುಸ್ಲೀಮರ ಸ್ಥಿತಿಯೂ ಇಲ್ಲಿ ಹೊರತಾಗಿಲ್ಲ. ಯಾರದೋ ಕದ್ದ ಮಾಲು, ವಸ್ತುಗಳಿಗೆ ಬದಲಾಗಿ ಹಣ ನೀಡುವ ಕಸುಬನ್ನು ಅದಾವ ಮೂಲೆಯ ಮುಸಲ್ಮಾನರು ಮಾಡುತ್ತಾರೋ?... ಪಾನ್ ಬ್ರೋಕರ್ ಕೆಲಸವಾಗಲಿ, ಬಡ್ಡಿ ವ್ಯಾವಹಾರವಾಗಲಿ ಇಸ್ಲಾಮಿನಲ್ಲಿ ನಿಷಿದ್ಧ. ಹಾಗೆ ಮಾಡೋರನ್ನು ಇಸ್ಲಾಂ ತನ್ನೊಳಕ್ಕಿಟ್ಟುಕೊಳ್ಳಲ್ಲ. ಇದನ್ನು ಇಸ್ಲಾಂ ಶತಮಾನಗಳ ಕಾಲ ಪಾಲಿಸಿಕೊಂಡು ಬಂದಿದೆ. ಇನ್ನು ಇದಾವ ಹೊನ್ನಾಳಿ ಅಥವಾ ಮಲಬಾರಿ ಸಾಬರು ಎನ್ನುವ ಮುಸಲ್ಮಾನ ವೇಷಧಾರಿಗಳೋ! ನಾಟಕದ ತುಂಬ ಇಸ್ಲಾಂ ಅನ್ನು ಹಣಿಯಲು ಮಾಡಿದ ಪುಡಿ ಪಾತ್ರಗಳಿವೆಲ್ಲ. ತಮ್ಮದೇ ಲಾಭಕ್ಕೆ ಏನೋ ಪುಸಲಾಯಿಸಿ ಮುಸ್ಲೀಮರ ಕೈಯಿಂದ ತಪ್ಪು ಕೆಲಸ ಮಾಡಿಸುವ ಹೆಗ್ಗಡೆಯರು ಅದೆಲ್ಲ ಬೇರೇನೋ ಸ್ವರೂಪ ಪಡಕೊಂಡಾಗ ಎಲ್ಲ ತಪ್ಪನ್ನು ಅವರ ಮೇಲೇ ಹಾಕಿಬಿಡೋದು! ಕಚ್ಚಾಟ, ಕೆಸರಾಟ ಶುರುವಾದಾಗ 'ನಿಮಗೆ ಹೊಡೆಯೋದು ಕಡಿಯೋದು ಬಿಟ್ಟರೆ ಬೇರೇನೂ ಗೊತ್ತಿಲ್ಲವೇನ್ರೋ' ಎಂದು ಗದರಿಸುವ ಮತ್ತು ಪೊಲೀಸರ ಮೂಲಕ 'ಇತ್ತೀಚೆಗೆ ಈ ಸಾಬರದು ಹಾರಾಟ ಜಾಸ್ತಿಯಾಗಿದೆ. ಇಕ್ರಲೋ ಈ ಸಾಬರನ್ನ' ಎಂದು ಅಬ್ಬರಿಸುವ, ದಲಿತರು ಮತ್ತು ಸಾಬರ ನಡುವೆ ಜಗಳ ಹಚ್ಚಿ ರಕ್ತಪಾತ ಮಾಡಿಸುವ ದೃಶ್ಯಗಳು ಮುಸ್ಲೀಮರ ವಿರುದ್ಧದ ಹುನಾರುಗಳಲ್ಲದೇ ಏನೂ ಅಲ್ಲ. ಹೊನ್ನಾಳಿಯ ಸಾಬರದು ಲೇವಾದೇವಿ ಕಸುಬೇ ಆಗಿರಬಹುದು. ಇಲ್ಲವೇ ಹೆಗ್ಗಡೆಯರ ಕುಮ್ಮಕಿನಿಂದ ಅವರೆಲ್ಲ ಒಂದಷ್ಟು ದರ್ಪವನ್ನೂ ಮಾಡುತ್ತಿರಬಹುದು. ಆದರೆ, ಅದೆಲ್ಲ ಆ ಪ್ರದೇಶದ ಸಾಮಾಜಿಕ ಹಣೆಬರಹ. ಹೆಗ್ಗಡೆಯರ ಹಾದರ, ದಬ್ಬಾಳಿಕೆ, ಶೋಷಣೆ ಹೇಗೆ ಅಲ್ಲಿನ ಸಾಮಾಜಿಕ ಸ್ಥಿತಿಯ ಒಂದು ಭಾಗವೋ ಹೊನ್ನಾಳಿ ಸಾಬರದೂ...

ಈಗಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಕ್ರೈಸ್ತರು ಮತ್ತು ಮುಸಲ್ಮಾನರು ಹೇಗೆ ಒಂದು ಪಕ್ಷದ ಅಥವಾ ಆ ಧರ್ಮಗಳೇತರರ ಟಾರ್ಗೆಟ್ ಆಗಿದ್ದಾರೋ, ಅದನ್ನೇ ನಾಟಕವೂ ಪ್ರತಿನಿಧಿಸುತ್ತಿರುವುದು ಸ್ಪಷ್ಟವಾಗಿದೆ. ರಂಗಾಯಣ ಸರ್ಕಾರದ ಹಣ ಪಡೆದುಕೊಂಡೇ ತನ್ನ ರಂಗಸಂಸ್ಕೃತಿ ಕಟ್ಟಿಕೊಳ್ಳಬೇಕಾದ್ದರಿಂದ ಪಡೆದ ಹಣಕ್ಕೆ ಹೀಗೆ ಋಣಭಾರ ತೀರಿಸದೇ ಬೇರೆ ದಾರಿಯಾದರೂ ಇದೆಯಾ?

ಗುತ್ತಿಯ ದೈನ್ಯತೆ ಮತ್ತು ಸೆನ್ಸ್ ಆಫ್ ಹ್ಯೂಮರ್ ಹಾಗೂ ಒಂದು ಮಟ್ಟಿನ ಸುಳ್ಳುಪಳ್ಳು ಇಡೀ ಪಾತ್ರಕ್ಕೆ ಸೋಗು ತುಂಬಿದೆ. ಅದು ಮುಗ್ಧತೆ ಎನ್ನುವ ಸೋಗೂ ಆಗಬಹುದು. ಅದರ ಸೋಗಿನಲ್ಲೇ ಇತರರ ಅನುಕಂಪೆ ಪಡೆಯಲು ಸಾಧ್ಯ, ಯಾಮಾರಿಸಲೂ ಸಾಧ್ಯ ಮತ್ತು ಬಚಾವಾಗಬಲ್ಲ ಅನಿವಾರ್ಯದ ಕ್ರಮ ಎಂದು ಧ್ವನಿಸುವುದು ಕೂಡ ಸಾಧ್ಯ ಎಂಬಂತಿದೆ ಆ ಪಾತ್ರದ ನಿರೂಪಣೆ.

ಆಗಿನ ಸಾಮಾಜಿಕ ಸ್ಥಿತಿಯಲ್ಲಿ ಗುತ್ತಿಯದೂ ಅವನ ನಾಯಿಯಂಥದೇ ಪಾಡು. ಒಡೆಯನ ಪ್ರೀತಿಗಾಗಿ ಮತ್ತು ಅವ ಕೊಡುವ ಎಂಜಿಲಿಗಾಗಿ ಬಾಲ ಅಲ್ಲಾಡಿಸುತ್ತ ಹಿಂಬಾಲಿಸುವುದು ನಾಯಿಯ ಜೀತದಾಳುವಿನಂಥ ಮನಸ್ಥಿತಿ. ಅದೇ ಆಗಿನ ದಲಿತರ ಸ್ಥಿತಿಯೂ ಕೂಡ. ಗುತ್ತಿಗೆ ಅವನ ನಾಯಿ ನಂಬಿಕೆಯ, ಪ್ರೀತಿ, ನಿಷ್ಠೆಯ ಪ್ರತೀಕ. ಅವನ ಜೀವ ಉಳಿಸಬಲ್ಲ ನಂಬಿಕಸ್ಥ ಭಂಟನಂತೆ.

ಈ ಹಿನ್ನೆಲೆಯಲ್ಲಿ ಕೊನೆಯ ದೃಶ್ಯವಂತೂ ತುಂಬ ಸಾಂಕೇತಿಕವಾಗಿದೆ. ದೋಣಿ ದಾಟುವಾಗ, ಗುತ್ತಿ ಯಾವುದೋ ಹೆಗ್ಗಡೆಯರ ಸಹಾನುಭೂತಿ ಗಳಿಸಿಕೊಂಡಿರುತ್ತಾನೆ. 'ಹೇ ನಮ್ಮ ಹುಡುಗ ಕರಕೊಂಡು ಹೋಗ್ರೋ' ಎನ್ನುವ ಆದೇಶದಿಂದಾಗೇ ಗುತ್ತಿಗೆ ದೋಣಿಯಲ್ಲಿ ಜಾಗ ಸಿಗುತ್ತದೆ. ನಾಯಿಗೆ ಮಾತ್ರ ಅಲ್ಲಿ ಅವಕಾಶವಿಲ್ಲ. 'ಹುಲಿಯ' ಹೋಗೋ ಈಜೋ ದಾಟಿ ಆ ಕಡೆಗೆ ಬಾರೋ ನಾನು ಕಾಯತೀನಿ... ಎನ್ನುವ ಗುತ್ತಿ ನಾಯಿಯನ್ನು ಸೆಳವಿನ ಒಡಲಿಗಟ್ಟಿಬಿಡುತ್ತಾನೆ. ನಾಯಿ ಸೆಳವಿನಲ್ಲಿ ಕೊಚ್ಚಿ ಹೋಗುತ್ತದೆ. ಗುತ್ತಿ ರೋದಿಸುತ್ತಾನೆ. ಅಂದರೆ ಇಲ್ಲಿ ಗುತ್ತಿ ತಾನುಳಿದುಕೊಳ್ಳಲು ತನ್ನ ನಂಬಿಕೆಗಳನ್ನೇ ಅನಿವಾರ್ಯವಾಗಿ ಬಲಿಕೊಡುತ್ತಾನೆ. ಕೇರಿಯ ನಂಬಿಕೆಗಳು, ಆಚಾರ, ವಿಚಾರ, ಜೀವಪರ ಆಶಯಗಳನ್ನು ಬಲಿಕೊಟ್ಟಂತೆ ಅದು. ಗುತ್ತಿಯರು ತಮ್ಮ ಮುಗ್ಧತೆಗೋ ಅಥವಾ ಬದುಕಲೇಬೇಕೆಂಬ ಹಟಕ್ಕೋ ಬಲಿಕೊಡುವ ನಂಬಿಕೆಗಳವು. ಹೀಗೆ ಕೇರಿಗಳನ್ನು ಬಿಟ್ಟು ಕೋರ್ಟು, ಕಚೇರಿಗಳಲ್ಲಿ ಸೂಟು ಬೂಟು ಹಾಕಿಕೊಂಡು ಮೈಮರೆತು ಕಡೆಗೆ ಕೇರಿ ಮತ್ತು ಜೀವಪರ ಆಶಯಗಳನ್ನೇ ಮರೆತು ಕಂಫರ್ಟ್ ದೋಣಿಗಳಲ್ಲಿ ತೇಲುತ್ತ ಬದುಕುವ ಸೋಗಲಾಡಿತನದ ಸಂಕೇತವದು. ಮೀಸಲಾತಿ ಅನ್ನೋದು ಮೇಲ್ವರ್ಗದವರು ತಮಗೆಂದೇ ಮಾಡಿಕೊಂಡ ವ್ಯವಸ್ಥೆಯಿಂದ ಇದಕ್ಕಿಂತ ಹೆಚ್ಚಿನ ನ್ಯಾಯ ದಕ್ಕೋದಾದರು ಎಂದು?

ಒಟ್ಟಾರೆ ಇಲ್ಲಿ ಮೂವರು ಮದುಮಗಳು ಸಜ್ಜಾಗುತ್ತಾರೆ. ಚೆನ್ನಿ, ತಿಮ್ಮಿ ಮತ್ತು ನಾಗಕ್ಕ. ಮುಕುಂದಯ್ಯ-ಚೆನ್ನಿ, ಗುತ್ತಿ-ತಿಮ್ಮಿ ಪ್ರೇಮಿಗಳ ಜೋಡಿಯಾದರೆ, ನಾಗಕ್ಕನದು ಯಾರದೋ ಕಣ್ಣಲ್ಲಿ ನಿತ್ಯ ಮದುಮಗಳಂತೆ ಕಾಣುವ ಸ್ಥಿತಿ. ಕಡೆಗೆ ಅದು ಬಲವಂತದ ಕೂಡಿಕೆಯಾಗುತ್ತದೆ. ನಾಗಕ್ಕನಿಗಿರುವ ಸಿಟ್ಟು ಕಡೆಗೆ ಸೇಡಾಗಿ ಪರಿವರ್ತನೆಗೊಳ್ಳುತ್ತದೆ. ಅದು ವೆಂಕಟಣ್ಣನ ಮಗಳು ಚೆನ್ನಿ ಓಡಿಹೋಗುವದಕ್ಕೆ ಸಂಚು ರೂಪಿಸುವ ಮೂಲಕ ಗೆಲುವಾಗುತ್ತದೆ. ಹೆಣ್ಣು ತನ್ನ ಮೇಲೆ ಪ್ರಹಾರ ಮಾಡಿದ ಗಂಡಿನ ಮೇಲೆ ತೀರಿಸಿಕೊಳ್ಳುವ ಸೇಡಾಗಿ ಕಾಣುತ್ತದೆ. ಗುತ್ತಿ-ತಿಮ್ಮಿ ಹಾಗೂ ಮುಕುಂದಯ್ಯ-ಚೆನ್ನಿ ಜೋಡಿಗೆ ಅವರದೇ ಸಮುದಾಯದಲ್ಲಿ ವಿರೋಧವಿದೆ. ಇಬ್ಬರೂ ತಮ್ಮ ಪ್ರೀತಿಗಾಗಿ ಸಮುದಾಯ ಮತ್ತು ನೆಂಟಸ್ಥರನ್ನೇ ಎದುರುಹಾಕಿಕೊಳ್ಳುತ್ತಾರೆ. ಎರಡೂ ಜೋಡಿ ಒಂದೇ ಎತ್ತರಕ್ಕೆ ಬಂದು ನಿಲ್ಲೋದು ಈ ಸಂದರ್ಭದಲ್ಲಿ.

ಇಲ್ಲಿ ಹಾರಿಸಿಕೊಂಡು ಹೋಗುವುದು ಕುತೂಹಲಕಾರಿ ವಿಷಯ. ಸಂಘರ್ಷದ್ದಲ್ಲ. ಹಾರಿಸಿಕೊಂಡು ಹೋಗುವ ಇಲ್ಲವೇ ಓಡಿ ಹೋಗುವ ಮನಸ್ಥಿತಿಗೆ ಹೆಣ್ಣೆ (ಪೀಂಚಲು, ನಾಗಕ್ಕ) ಪ್ರಧಾನ ಭೂಮಿಕೆ ನಿಭಾಯಿಸುತ್ತಾಳೆ. ಹಾಗೇ ಹಾದರ, ಹಾಸಿಗೆಯ ವಿಷಯದಲ್ಲೂ (ನಾಗತ್ತೆ) ಹೆಣ್ಣೆ ಇಲ್ಲಿ ಪ್ರಭಲ... ಕಡೆಗೆ ಹೆಣವಾಗೋದು (ವೆಂಕಟಣ್ಣ ಸಾವು) ಗಂಡಸರೇ.

Saturday, 7 November 2009

ಅವಳು ಬಂದಳು...

ನನ್ನೆದೆಯೊಳಗೆ ಜತನದಿಂದ ಕಾಪಿಟ್ಟ ಪ್ರೀತಿಹಾಲು ಬಟ್ಟಲ ನೆಕ್ಕಿ ಪರಾರಿಯಾಗುವ ಕಳ್ಳ ಹೆಣ್ಣುಬೆಕ್ಕುಗಳಿಗೆ ಬೇಸತ್ತು, ಮನದ ಕಿಟಕಿ- ಬಾಗಿಲುಗಳ ಭದ್ರವಾಗಿ ಮುಚ್ಚಿಟ್ಟಿದ್ದೆ. ಅವಳು ಬಂದಳು. ಮಿಂಚಿನಂತೆ ಫಳ ಫಳ ಹೊಳೆಯುತ್ತ, ಸಿಡಿಲಿನಂತೆ ಅಬ್ಬರಿಸುತ್ತ, ಪುಡಿ ಪುಡಿ ಮಾಡಿ ಹಾಕಿದಳು ಅಹಮಿಕೆ, ಅನುಮಾನಗಳ ಗಾಜಿನ ಕಿಟಕಿಗಳ! ಕನಸುಗಳ ಬೆನ್ನೇರಿ ಮೋಹದ ಗಾಳಿಗುಂಟ ತೇಲಿ ಬಂದಳು, ಅದೆಷ್ಟು ಆಸೆಯ ಭ್ರಂಗಗಳ ಜತೆಯಲ್ಲಿ!

Friday, 4 September 2009

ಜೋಗುಳ ೨೦೦.. ತಾಯ್ತನದ ಸಂಭ್ರಮ ಮತ್ತು ಕೆಲ ನೆನಪುಗಳು...


ಜೋಗುಳ... ತಾಯ ಎದೆ ಹಾಡು. ಪ್ರತಿಯೊಬ್ಬನ ಮೊತ್ತ ಮೊದಲ ಮಹಾಕಾವ್ಯ. ಈ ಜಗಕ್ಕೆ ಕಣ್ಣು ತೆರಕೊಳ್ಳುವ ಮುನ್ನ, ಕಿವಿಗೆ ಎಲ್ಲ ಶಬುದಗಳ ಅರ್ಥ ಹೊಳೆಯುವ ಮುನ್ನ ಕೇಳಿಸಿಕೊಳ್ಳುವ ಜೀವಸಂಗೀತವದು. ಅವಳೆದೆಯಾಳದ ಪ್ರೀತಿ ಹಾಡುಗಳಾಗಿ ಕಂದನ ಭಾವಕೋಶದ ಪ್ರತಿ ಜೀವಕಣಕ್ಕೂ ತಾಗುವ ಪರಿಯೇ ಅನನ್ಯ. ನಾವು ಮನುಷ್ಯ ಜೀವವಾಗುವ ಪ್ರಕ್ರಿಯೆಯ ಮೊದಲ ಹಂತವದು.


ತಾಯಿಯಾಗುವ ಬಹುದೊಡ್ಡ ಸೌಭಾಗ್ಯ ಹೆಣ್ಣಿಗೆ ಮಾತ್ರ!
ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಸೃಷ್ಟಿಯ ಲೀಲೆಗೆ ಹೆಣ್ಣಿನ ಒಡಲೇ ಬೇಕು! ಪುರುಷಸಿಂಹ ಎನಿಸಿಕೊಳ್ಳುವ ಗಂಡು ಅಪಾರ ಹಣ, ಐಶ್ವರ್ಯ, ಸಂಪತ್ತನ್ನು ಗಳಿಸಬಹುದು... ತನ್ನ ಅಧಿಕಾರದ ಧಿಮಾಕಿನಲ್ಲಿ ಹೂಂಕರಿಸಬಹುದು, ಜಗತ್ತನ್ನು ಗೆಲ್ಲುವ ಸಾಹಸಕ್ಕೂ ಇಳಿಯಬಹುದು, ಪರಾಕ್ರಮಿಯಂತೆ ಮೀಸೆ ತಿರುವಿ, ಸೆಡ್ಡು ಹೊಡೆದು ಈ ಭೂಮಂಡಲವನ್ನೇ ತಿರುಗಿಸಿಡಲೂಬಹುದೇನೋ! (?) ಆದರೆ, ಬಡ್ಡೀಮಗ ತಿಪ್ಪರಲಾಗ ಹಾಕಿದರೂ ತನ್ನೊಡಲಲ್ಲಿ ಒಂದೇ ಒಂದು ಜೀವಕುಡಿಯನ್ನು ಬೆಳೆಸಲಾರ...
ಅದೇನಿದ್ದರೂ ಹೆಣ್ಣಿಗೆ ಮಾತ್ರ ಈ ಸೌಭಾಗ್ಯ! ಅದಕ್ಕೇ ತಾಯಿ ಎಂದರೆ ದೈವ. ಮಾ ತುಝೇ ಸಲಾಂ...

ಒಡಲೂ ಕೂಡ ಬಾಡಿಗೆ ಕೊಡಬಹುದಂತೆ! ಮೊದಲ ಸಲ ಕೇಳಿದಾಗ ಮೈ ಉರಿದುಹೋಗಿತ್ತು. ಮನೆ, ಜಾಗ, ವಸ್ತು... ಹೀಗೆ ಏನೆಲ್ಲ ಬಾಡಿಗೆ ಕೊಡಬಹುದು. ಆದರೆ, ಒಂದು ಜೀವಕ್ಕೆ ಜನ್ಮ ಕೊಡುವ ಹೆಣ್ಣಿನ ಒಡಲು ಕೂಡ ಬಾಡಿಗೆಗೆ ಕೊಡಬಹುದೇ!... ಮೊದಲ ಬಾರಿಗೆ ಇದನ್ನು ಕೇಳಿದಾಗ ಕ್ಷಣ ಹೊತ್ತು ದಂಗಾದೆ. ಇದರ ಆಳ, ಹರವು ಹುಡುಕುತ್ತ ಹೋದಂತೆ ವಾಸ್ತವ ಚಿತ್ರಣ ದಕ್ಕುತ್ತ ಹೋಯಿತು. ಇದರ ಮಾನವೀಯ ಮುಖದ ದರ್ಶನವಾಯಿತು. ಈ ಕಾಲದ ಬಹುದೊಡ್ಡ ತಲ್ಲಣ ಇದೆನಿಸಿತು.

ಮನುಷ್ಯ ಬದುಕಿನ ಇಂಥದೊಂದು ವಿಲಕ್ಷಣ ಮುಖ ಮತ್ತೊಂದರ್ಥದಲ್ಲಿನ ಮಾನವೀಯ ಮುಖ... ಕಥೆಯಾಗಿ, ದೃಶ್ಯವಾಗಿ, ಚಿತ್ತಾರವಾಗಿ, ಕಾವ್ಯವಾಗಿ ಬರೋದು ಹೇಗೆ... ? ಕಿರುತೆರೆಯ ಸೂಕ್ಷ್ಮ ಸಂವೇದನೆಯ ನಿರ್ದೇಶಕ ವಿನು ಬಳಂಜ ಇಂಥದೊಂದು ಸಾಹಸಕ್ಕೆ ಕೈಹಾಕಿದ್ದರು. ಬಹುಕಾಲದ ಒಡನಾಡಿ, ರಂಗಸಂಗಾತಿ ನರೇಶ್ ನನ್ನನ್ನು ಬಳಂಜ ಅವರಿಗೆ ಪರಿಚಯಿಸಿದ. ಆ ಮೂಲಕ ಹೊಸ ಗೆಳೆಯನತ್ತ ಮತ್ತು ಒಂದು ಅರ್ಥಪೂರ್ಣ ಸೃಜನಶೀಲ ಚಟುವಟಿಕೆಯತ್ತ ಮತ್ತೆ ನನ್ನ ಸೆಳೆದ. ಥ್ಯಾಂಕ್ಸ್ ನರೇಶ್.

ನಚಿಕೇತ (ಝೀ ಚಾನೆಲ್ ನ ಕಥಾ ವಿಭಾಗದ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ) ನೀಡಿದ ಒಂದು ಸಣ್ಣ ಕಥಾ ಎಳೆ ಹಿಡಿದು ಕುಳಿತಿದ್ದರು ವಿನು ಬಳಂಜ. ಸ್ಕ್ರಿಪ್ಟ್, ಸಂಭಾಷಣೆ ಕೆಲಸ ಸತ್ಯಮೂರ್ತಿ ಆನಂದೂರ್ ಮಾಡುತ್ತಿದ್ದರು. ಪ್ರಭಾಕರ್ ಕ್ಯಾಮೆರಾ ಕನ್ಯೆಯ ಪಾಲಾಗಿದ್ದರು. ಅದರ ಹರವನ್ನು ವಿಸ್ತರಿಸುವ ಕೆಲಸದಲ್ಲಿ ವಿನು, ಸತ್ಯ, ನರೇಶ್ ಅವರುಗಳ ಜತೆ ನಾನೂ ಸೇರಿಕೊಂಡೆ. ಕಥಾ ವಿಸ್ತರಣೆಯಲ್ಲಿ ನನಗೂ ಜವಾಬ್ದಾರಿ ಸಿಕ್ಕಿದ್ದು ಖುಷಿ ಕೊಟ್ಟಿತು.

ಬಾಡಿಗೆ ತಾಯಿ ಎನ್ನುವುದೊಂದು ಧಂಧೆಯಾಗಿ ಹೋಗಿದೆ ಎನ್ನುವ ನನ್ನ ಜರ್ನಲಿಸ್ಟ್ ಬುದ್ಧಿಯ ಜತೆಗೆ ತಾಯ್ತನದ ಜೀವಪ್ರೀತಿಯ ಸೆಳೆತವೂ ನನಗಿತ್ತು. ಕೆಲವು ಸಂದರ್ಭಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ. ನನ್ನ ಸಹೋದರಿ (ಅವಳ ಹೆಸರು ಷಹನಾಜ್) ಮೊದಲ ಮಗುವಿಗೆ ಜನ್ಮವಿತ್ತಾಗ, ಅದೇ ಸಮಯದಲ್ಲಿ ಸಹೋದರನ (ಝಕೀರ್) ಹೆಂಡತಿಯೂ ಮೊದಲ ಬಾರಿಗೆ ತಾಯಿ ಆದಾಗ ಮನೆಯ ಟೆರೇಸ್ ಮೇಲೊಂದು 'ತಾಯ್ತನದ ಸಂಭ್ರಮ' ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ನನ್ನ ಅಮ್ಮ (ಮುಮ್ತಾಜ್) ಮತ್ತು ನಮ್ಮೆಲ್ಲ ಬಳಗಕ್ಕೆ, ಸ್ನೇಹಿತರಿಗೆ ಅದೊಂದು ಟಚಿ ಈವೆಂಟ್ ಅನಿಸಿತ್ತು. ಅವತ್ತು ನಾನು ಮತ್ತು ಚಿಕ್ಕ ತಂಗಿ (ಅಮೀರಜಾನ್) ಸೇರಿ ಅದ್ಭುತ ಸ್ಟೇಜ್ ರೂಪಿಸಿದ್ದೆವು. ನೂರಾರು ಬಲೂನು, ಕ್ಯಾಂಡೆಲ್ ಮತ್ತು ಹಣತೆ ಬಳಸಿ ಒಂದು ಪುಟ್ಟ ಹೊಸ ಲೋಕವನ್ನೇ ಸೃಷ್ಟಿ ಮಾಡಿದ್ದೆವು. ಅವತ್ತು ಇಬ್ಬರೂ ತಾಯಂದಿರಿಗೆ ಪುಷ್ಟವೃಷ್ಟಿ! ಜತೆಗೆ ಹೊಸ ವಸ್ತ್ರ, ಪುಟ್ಟ ಚಿನ್ನದ ದಿಲ್, ಫ್ಲಾವರ್ ಬುಕೇ, ನೆನಪಿನ ಪತ್ರ, ತಾಯ್ತನ ಮತ್ತು ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಬರೆದ ಕೆಲವು ಸಾಲುಗಳ ಜತೆ ನನ್ನದೂ ಒಂದಷ್ಟು ಸಾಲುಗಳನ್ನು ಹೊಂದಿದ ಮತ್ತು ಕೊನೆಯ ಕೆಲ ಪುಟಗಳಲ್ಲಿ ಕಂದಮ್ಮಗಳ ತಾಯಂದಿರು, ಅಜ್ಜ, ಅಜ್ಜಿಯರು, ಅಪ್ಪ, ನನ್ನಮ್ಮ ಉರ್ದುವಿನಲ್ಲಿ ಬರೆದ ಶುಭಾಶಯಗಳು ಹಾಗೂ ಅಂದು ಬಂದ ನೂರಾರು ಬಂಧು ಮಿತ್ರರ ಶುಭಾಶಯಗಳನ್ನು ಅವರಿಂದಲೇ ದಾಖಲಿಸಿ ಒಂದು ಪುಸ್ತಕ ರೂಪಿಸಿದ್ದೆ. ಹ್ಯಾಂಡ್ಮೇಡ್ ಕಾಗದ ಬಳಸಿ ಮಾಡಿದ ಆ ಪುಸ್ತಕವನ್ನು ನನ್ನ ಅಮ್ಮ ಅಪ್ಪ ಮತ್ತು ಅತ್ತಿಗೆಯ ಅಮ್ಮ ಅಪ್ಪ ಹಾಗೂ ಸಹೋದರಿಯ ಅತ್ತೆ-ಮಾವ ಅವರುಗಳ ಮೂಲಕ ಇಬ್ಬರೂ ತಾಯಂದಿರ ಉಡಿಯಲ್ಲಿಟ್ಟಾಗ ನೆರೆದವರ ಕಣ್ಣಾಲಿಗಳು ಹಸಿಗೊಂಡಿದ್ದವು, ಮುಖಗಳಲ್ಲಿ ಪ್ರೀತಿಯ ಹಾರೈಕೆಗಳ ಲಾಸ್ಯವಿತ್ತು... ನನ್ನಮ್ಮ ಮುಮ್ತಾಜ್ ಆದ ಸಂತಸಕ್ಕೆ ಗಳ ಗಳನೇ ಅತ್ತುಬಿಟ್ಟಿದ್ದಳು...

ಮತ್ತೊಂದು ಸಂದರ್ಭ. ಗೆಳೆಯ, ಸಹೋದ್ಯೋಗಿ ರೋನಾಲ್ಡ್ ಮತ್ತು ಹೂಮನದ ರೋಹಿಣಿ ಪುತ್ರಿ ಮುದ್ದು ಋತು ಮೂರನೇ ವಸಂತಕ್ಕೆ ಕಾಲಿಟ್ಟ ಸಂತಸದ ಘಳಿಗೆಯಂದು ಹೆಗಡೆ ನಗರದಲ್ಲಿನ ಅವರ ನಿವಾಸದ ಟೆರೇಸ್ ಮೇಲೆ ಒಂದು ಸುಂದರ ಸಮಾರಂಭ ಮಾಡಿದ್ದೆವು. ಋತು ಅಪ್ಪ ಅಮ್ಮನಿಗೆ ಪುಷ್ಪವೃಷ್ಟಿಯ ಸ್ವಾಗತದ ಮೂಲಕ, ನೂರಾರು ಬಲೂನು, ನೂರು ಕ್ಯಾಂಡೆಲ್ ಬೆಳಕಿನ ನಡುವೆ ಋತುಗೆ ಶುಭಾಶಯ ಹೇಳಿದ ಅರ್ಥಪೂರ್ಣ ಘಳಿಗೆಯದು. ರೋಹಿಣಿ ಮುಖದಲ್ಲಿನ ತಾಯ್ತನದ ಸಂಭ್ರಮ ಕಳೆಕಟ್ಟಿದ ರೀತಿ ಇನ್ನೂ ನನ್ನ ನೆನಪಲ್ಲಿ ಹಸಿರಾಗೇ ಇದೆ.


ತಾಯ್ತನ ಮತ್ತು ಹೆಣ್ಣಿನ ಬದುಕಿಗೆ ಹೀಗೆ ನನ್ನೊಳಗೊಂದು ಹೆಮ್ಮೆಯ ಅಭಿಮಾನದ ವಿಶಾಲ ಜಾಗೆಯಿತ್ತು. ಅದು ಮತ್ತೆ ವಿಸ್ತಾರಗೊಂಡಂತೆನಿಸಿದ್ದು ಜೋಗುಳ ಧಾರಾವಾಹಿಯ ನಿರ್ಮಾಣ ಕಾರ್ಯದಲ್ಲಿ ನಾನೂ ತೊಡಗಿಕೊಂಡಾಗ. ನಡುವೆಲ್ಲೊ ನನ್ನೊಳಗಿನ ಕೆಲವು ತುಮುಲಗಳಿಗೆ, ಸೂಕ್ಷ್ಮ ಸಂವೇದನೆಗಳಿಗೊಂದು ದೊಡ್ಡ ಏಟಾಗಿತ್ತು. ಪ್ರೀತಿಯ ಮೇಲಿನ ನಂಬಿಕೆ ಯಾಕೊ ಸಡಿಲಗೊಂಡಿದ್ದ ಹೊತ್ತು. ಕೊಂಚ ನೆಮ್ಮದಿ ಕಂಡುಕೊಳ್ಳುವ ಮತ್ತೆ ಬದುಕಿನ ಹೊನಲಿಗೆ ಬಂದು ನಿಲ್ಲುವ ಮನಸು ಮಾಡಿದ್ದ ಹೊತ್ತೂ ಆಗಿತ್ತು. ಅದೇ ಸಮಯಕ್ಕೆ ಜೋಗುಳದ ಹಾಡು ಮಾರ್ದನಿಸತೊಡಗಿತು. ಮತ್ತೆ ಸೃಜನಶೀಲ ಲೋಕಕ್ಕೆ ಎಳೆದು ತಂದಿತ್ತು ನನ್ನೊಳಗಿನ ಮಗು.

ಭೀಷ್ಮ ಸಹಾನಿ ಅವರ ಮಾಧವಿ ನಾಟಕ ಓದಿದ್ದೆ. ನನ್ನ ಮತ್ತೊಬ್ಬ ರಂಗಸಂಗಾತಿ ಧನಂಜಯ್ ಕುಲಕರ್ಣಿ ನಾಟಕ ಮಾಡಿಸುವುದಕ್ಕೆ ಓಡಾಡುತ್ತಿದ್ದ. ಅದರೊಳಗಿನ ಗಾಲವ ಪಾತ್ರ ನನ್ನಿಂದ ಮಾಡಿಸುವ ಮನಸೂ ಇತ್ತು ಆತನಿಗೆ. ನಾವು ಮಾಧವಿ ಪಾತ್ರಕ್ಕೆ ಹುಡಗಿಯೊಬ್ಬಳ ತಲಾಶ್ ನಡೆಸಿದೆವು. ಅದಕ್ಕೆ ಸೂಕ್ತವಾಗುವ ಒಬ್ಬ ಸುಂದರ ಹೆಣ್ಣು ಸಿಕ್ಕಿರಲಿಲ್ಲ. ಹೀಗಾಗಿ ಆ ಮಾಧವಿ ಮನದೊಳಗೇ ಉಳಿದುಬಿಟ್ಟಿದ್ದಳು.
ವಿನು ಜತೆ ಜೋಗುಳದ ಕಥೆ ಚರ್ಚೆ ನಡೆಸುತ್ತಿದ್ದಾಗ ಮಾಧವಿ ಮತ್ತೆ ನೆನಪಾದಳು. ವಿನು ಜೋಗುಳದ ದೇವಕಿ ಪಾತ್ರಕ್ಕೂ ಮಾಧವಿಗೂ ಒಂದರ್ಥದ ಸಾಮ್ಯತೆ ಇದೆ ಎನಿಸಿತು. ಅದನ್ನೇ ವಿನುಗೆ ಹೇಳಿದೆ. ತಕ್ಷಣ ಮಾಧವಿಯನ್ನು ಜೋಗುಳಕ್ಕೆ ರಿಲೇಟ್ ಮಾಡುವ ನಿರ್ಧಾರವಾಯ್ತು. ಒಂದಷ್ಟು ಎಪಿಸೋಡ್ ಗಳಲ್ಲಿ ಮಾಧವಿ ಬಂದು ಹೋದಳು.

ಮಾಧವಿ ಕಥೆಯ ಒಟ್ಟು ಸಾರಾಂಶ...
ವಿಶ್ವಾಮಿತ್ರನಿಗೆ ಒಬ್ಬ ಶಿಷ್ಯ ಇರುತ್ತಾನೆ. ಆತನ ಹೆಸರು ಗಾಲವ. ವಿದ್ಯಾಭ್ಯಾಸ ಎಲ್ಲ ಮುಗಿದ ನಂತರ ಗಾಲವ ಗುರುವಿನ ಬಳಿ ತೆರಳಿ ಗುರುದಕ್ಷಿಣೆ ಕೊಟ್ಟೇ ತೀರುವೆ ಎಂದು ಹೇಳುತ್ತಾನೆ. ಶಿಷ್ಯನ ಗರ್ವಕ್ಕೆ ವಿಶ್ವಾಮಿತ್ರ ಕಠಿಣವಾದ ಗುರುದಕ್ಷಿಣೆಯನ್ನೇ ಕೇಳುತ್ತಾರೆ. ಎಂಟು ನೂರು ಅಶ್ವಮೇಧ ಕುದುರೆ ತಂದುಕೊಡು ಎಂದು ಗಾಲವನಿಗೆ ಆಜ್ಞಾಪಿಸುತ್ತಾರೆ. ಗಾಲವ ಒಪ್ಪಿಕೊಳ್ಳುತ್ತಾನೆ. ಅಷ್ಟು ದೊಡ್ಡ ಗುರುದಕ್ಷಿಣೆ ಹೊಂದಿಸುವಲ್ಲಿ ಸುಸ್ತಾದ ಗಾಲವ ಯಾಕೊ ನದಿ ತೀರಕ್ಕೆ ಬಂದಿರುತ್ತಾನೆ. ಅಲ್ಲೊಬ್ಬ ಈತನಿಗೆ ಯಯಾತಿ ಮಹರಾಜನ ಬಗ್ಗೆ ಹೇಳುತ್ತಾನೆ. ದಾನದಲ್ಲಿ ದೊಡ್ಡ ಶೂರ ಎಂದೆಲ್ಲ ಹೆಸರು ಮಾಡಿರುವ ಯಯಾತಿ ಮಹಾರಾಜ ಯಾರು ಏನೇ ಕೇಳಿದರೂ ನೆರವಾಗುತ್ತಾನೆ ಎಂದೂ ಹೇಳುತ್ತಾನೆ. ಗಾಲವ, ಯಯಾತಿ ಮಹಾರಾಜನ ಆಸ್ಥಾನಕ್ಕೆ ತೆರಳಿ ತನ್ನ ಅಳಲನ್ನು ಹೇಳಿಕೊಳ್ಳುತ್ತಾನೆ. ತನ್ನ ಬಳಿ ಕೆಲವೇ ನೂರು ಕುದುರೆಗಳಿರುವುದಾಗಿ ಹೇಳಿದ ಮಹಾರಾಜ, ಅವನ್ನು ಕೊಟ್ಟುಬಿಡುತ್ತಾನೆ. ಆದರೆ, ಉಳಿದ ಕುದುರೆಗಳನ್ನು ವ್ಯವಸ್ಥೆ ಮಾಡಲು ತಾವೇ ನೆರವಾಗಬೇಕು ಎಂದು ಗಾಲವ ಮಹಾರಾಜರಿಗೆ ಅಂಗಲಾಚುತ್ತಾನೆ.

ಯಯಾತಿ ಮಹಾರಾಜನಿಗೆ ಒಬ್ಬ ಮಗಳಿರುತ್ತಾಳೆ. ಆಕೆ ವರಪುತ್ರಿ. ಆಕೆ ಯಾವಾಗ ಬೇಕೋ ಆಗ ಮತ್ತೆ ಕನ್ಯತ್ವ ಪಡೆದುಕೊಳ್ಳುವ ವಿಶಿಷ್ಠ ವರವೊಂದನ್ನು ಹೊಂದಿರುತ್ತಾಳೆ. ಅವಳ ಹೊಟ್ಟೆಯಿಂದ ಹುಟ್ಟುವ ಮಗು ಚಕ್ರವರ್ತಿ ಆಗುವನೆಂಬ ವರವು ಆಕೆಗಿರುತ್ತದೆ. ಅವಳೇ ಮಾಧವಿ. ಅವಳನ್ನೇ ಗಾಲವನಿಗೆ ನೀಡಿಬಿಡುತ್ತಾನೆ ಯಯಾತಿ ಮಹಾರಾಜ!
ವಿವಿಧ ರಾಜರುಗಳ ಬಳಿ ಇರುವ ಅಷ್ಟು ಇಷ್ಟು ಸಂಖ್ಯೆಯಲ್ಲಿರುವ ಅಶ್ವಮೇಧ ಕುದುರೆಗಳನ್ನು ಪಡೆದುಕೊಳ್ಳಲು ಮಾಧವಿಯನ್ನೇ ಬಳಸಿಕೊಳ್ಳುವಂತೆ ಯಯಾತಿ ಮಹಾರಾಜ ಗಾಲವನಿಗೆ ಸಲಹೆ ನೀಡುತ್ತಾನೆ!

ಚಕ್ರವರ್ತಿಯಾಗಬಲ್ಲ ಸಂತಾನವಿಲ್ಲದೇ ಕೊರಗುತ್ತಿದ್ದ ಹಲವು ರಾಜರುಗಳ ಬಳಿ ಮಾಧವಿ ತೆರಳುತ್ತಾಳೆ. ಅವರ ಅಂತಃಪುರದಲ್ಲಿ ಅವಳ ದೇಹ ಬಳಲಿಹೋಗುತ್ತದೆ. ಸಂತಾನ ಕೊಟ್ಟು ಒಡಲು ಬರಿದಾದಂತೆನಿಸಿರುತ್ತದೆ. ಈ ನಡುವೆ ಮಾಧವಿ ಮತ್ತು ಗಾಲವರ ನಡುವೆ ಪ್ರೇಮಾಂಕುರವಾಗಿರುತ್ತದೆ. ಪ್ರೇಮಿಯ ಗುರಿ ಮುಟ್ಟಿಸುವುದು ಈಗ ಅವಳ ಬದುಕಿನ ಸಹಜವಾದ ಗುರಿಯೇ ಆಗಿಬಿಟ್ಟಿರುತ್ತದೆ. ಪ್ರೇಮಕ್ಕಾಗಿ ಎಂಥ ತ್ಯಾಗಕ್ಕೂ ಆಕೆ ಸಜ್ಜಾಗಿರುತ್ತಾಳೆ.

ಅಂತೂ ಗಾಲವನಿಗೆ ಬೇಕಾದಷ್ಟು ಅಶ್ವಮೇಧ ಕುದುರೆಗಳನ್ನು ಮಾಧವಿ ಕೂಡಿಸಿಕೊಡುತ್ತಾಳೆ. ತನ್ನ ಶಿಷ್ಯನ ಗುರುದಕ್ಷಿಣೆ ಪಡೆಯಲು ವಿಶ್ವಾಮಿತ್ರ ದೊಡ್ಡ ಸಮಾರಂಭವನ್ನೇ ಏರ್ಪಡಿಸುತ್ತಾರೆ. ಅಂದು ಮಾಧವಿಯನ್ನು ವರಿಸುವುದು ಗಾಲವನ ನಿರ್ಧಾರವಾಗಿರುತ್ತದೆ. ಆದರೆ, ಗಾಲವ ತನ್ನ ಮಾಧವಿ ಮತ್ತೆ ಕೌಮಾರ್ಯ ಪಡೆದುಕೊಳ್ಳಬೇಕು ಎಂದು ಬೇಡಿಕೆ ಮುಂದಿಡುತ್ತಾನೆ. ನನ್ನನ್ನು ಈಗಿರುವ ಸ್ಥಿತಿಯಲ್ಲಿ ಒಪ್ಪುವುದಾದರೆ ಮಾತ್ರ ನಿನ್ನ ವರಿಸುವೆ ಗಾಲವ ಎಂದು ಮಾಧವಿ ಸ್ಪಷ್ಟವಾಗಿ ಹೇಳಿಬಿಡುತ್ತಾಳೆ. ಗಾಲವ ಇದನ್ನು ಒಪ್ಪುವುದಿಲ್ಲ. ಅತ್ತ ಸಮಾರಂಭದಲ್ಲಿ ಗುರುಗಳಿಂದ, ಹಿರಿಯರಿಂದ, ವಿವಿಧ ಗಣ್ಯರಿಂದ ಗಾಲವನ ಗುಣಗಾನ ನಡೆಯುತ್ತಿರುತ್ತೆ. ಗಾಲವ ಹೆಮ್ಮೆಯಿಂದ ಬೀಗುತ್ತಿರುತ್ತಾನೆ. ಇತ್ತ ತನ್ನ ಪ್ರೇಮಿಯಿಂದ ತಿರಸ್ಕರಿಸಲ್ಪಟ್ಟ ಹೆಣ್ಣು ಮಾಧವಿ ಕಾಡಿನಲ್ಲಿ ಮರೆಯಾಗುತ್ತಾಳೆ...

ಈ ಕಥೆ ಹೇಳಿದಾಗ ವಿನು ದಂಗಾದರು. ತಕ್ಷಣ ಇದನ್ನು ಜೋಗುಳದಲ್ಲಿ ತರುವ ನಿರ್ಧಾರವನ್ನೂ ಕೈಗೊಂಡರು. ಮಾಧವಿ ಪುಸ್ತಕ ಎಲ್ಲಿಂದಲೋ ನರೇಶ್ ತಂದೇಬಿಟ್ಟ. ಜೋಗುಳದ ವಿದ್ಯಾಧರ ಕ್ಯಾರೆಕ್ಟರ್ ತನ್ನ ಕಾಲೇಜು ವಿದ್ಯಾರ್ಥಿಗಳಿಗೆ ಮಾಧವಿ ನಾಟಕ ಆಡಿಸುವ ಒಂದು ಸೀನ್ ಸಿದ್ಧಗೊಂಡಿತು. ಮಾಧವಿ ಪುಸ್ತಕ ದೇವಕಿ ಕೈಗೂ ಸಿಕ್ಕು ದೇವಕಿ ಅದರ ಮಾಧವಿಯ ಕ್ಯಾರೆಕ್ಟರ್ ಒಳಗಿಳಿಸಿಕೊಳ್ಳುವ ಸಿಕ್ವೆನ್ಸ್ ಭರ್ಜರಿಯಾಗೇ ಸಿದ್ಧವಾಯ್ತು. ತೆರೆಯ ಮೇಲೂ ಪ್ರೇಕ್ಷಕರು ಅದನ್ನು ಸ್ವೀಕರಿಸಿದರು... ಹೀಗೆ ಒಂದು ಧಾರಾವಾಹಿಯ ಮುಖ್ಯ ಪ್ರವಾಹಕ್ಕೆ ನಮ್ಮೆಲ್ಲರ ಆಶಯಗಳೂ ಅಂಡರ್ ಕರೆಂಟ್ ಆಗಿ ಸೇರಿಕೊಂಡು ಝೀ ಚಾನೆಲ್ ನಲ್ಲಿ ಜೋಗುಳ ಧುಮ್ಮಿಕ್ಕಿ ಹರಿಯಿತು. ಹೊಸ ಹೊಸ ತಿರುವುಗಳಿಂದ ಜೋಗುಳ ಅರ್ಥಪೂರ್ಣವಾಗಿ ಬೆಳೆಯುತ್ತಿದೆ.

ಇದೇ 2009 ಆಗಸ್ಟ್ 29ರಂದು ಅದರ 200ರ ಎಪಿಸೋಡ್ ದಾಟಿದ ಸಂಭ್ರಮ ಸಾಲಿಟೇರ್ ಹೊಟೇಲಿನಲ್ಲಿ ಕಳೆಕಟ್ಟಿತ್ತು. ಎಲ್ಲ ನೆನಪಾಯಿತು... ಕಳೆದ ಬಾಲ್ಯ, ಕಂಡುಂಡ ನೋವು, ನಲಿವುಗಳ ಭಾವಲೋಕದಲ್ಲಿ ಮತ್ತೆ ತೇಲಾಡಿದಂತಾಯಿತು. ಅದರಲ್ಲಿ ಮಿಂಚಿದವರ ಮುಖಗಳಲ್ಲಿನ ಒಬ್ಬೊಬ್ಬರ ನಗು ನನಗೊಂದು ದಿವ್ಯಬೆಳಕಾಗಿ ಕಾಡಿತು. ನನ್ನೊಳಗಿನ ದೇವಕಿ ಬಹುವಾಗೇ ಕಾಡಿದಳು... ನನ್ನೊಳಗೇ ಆವರಿಸಿದ ಕತ್ತಲಲ್ಲಿ ಕರಗಿಹೋದೆ...
ನನ್ನ ದಿಲ್ ಪೂರ್ವಕ ಸಲಾಂ ದೇವಕಿಯಂಥ ಹೆಣ್ಣಿಗೆ, ಗೆಳೆಯ ನರೇಶ್ ಗೆ ಮತ್ತು ಒಟ್ಟಾರೆ ಜೋಗುಳ ತಂಡದ ಪ್ರತಿ ಚೇತನಕೂ...